ಪ್ರಕರಣದ ಹಿನ್ನೆಲೆ
ಧಾರವಾಡದ ವಿರೂಪಾಕ್ಷಗೌಡ ಎಂಬುವವರು ಹಿಂದೂ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು, 2008ರಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ ಪ್ರವರ್ಗ 3(A) ಅಡಿಯಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದರು. ಈ ಪ್ರಮಾಣಪತ್ರದ ಆಧಾರದಲ್ಲಿ ಅವರು 23.06.2009ರಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದರು.
2018ರಲ್ಲಿ ತಹಶೀಲ್ದಾರರು ನಡೆಸಿದ ಪರಿಶೀಲನೆಯಲ್ಲಿ ಅವರ ಜಾತಿ ಪ್ರಮಾಣಪತ್ರ ಸರಿಯಾಗಿದೆ ಎಂದು ದೃಢಪಡಿಸಲಾಗಿತ್ತು. ಆದರೆ, ಈ ಪರಿಶೀಲನೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯ ಬದಲಾಗಿ ಕರ್ನಾಟಕ ರಾಜ್ಯದ ಪಟ್ಟಿಯನ್ನು ಆಧರಿಸಿ ನಡೆಸಲಾಗಿತ್ತು.
ನಂತರ 08.08.2022ರಂದು ಜಿಲ್ಲಾಧಿಕಾರಿಗಳು ಹಿಂದೂ ರೆಡ್ಡಿ ಸಮುದಾಯವು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಲ್ಲ ಎಂದು ತಿಳಿಸಿ, ಸಿಐಎಸ್ಎಫ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪಕ್ಷಗಳ ವಾದಗಳು
ಸಿಐಎಸ್ಎಫ್ ಪರ ವಕೀಲರು, ನೌಕರರು ಕೇಂದ್ರ ಸರ್ಕಾರದ ಮೀಸಲಾತಿಗೆ ಅರ್ಹರಲ್ಲದಿದ್ದರೂ ತಪ್ಪಾದ ಪ್ರಮಾಣಪತ್ರದ ಆಧಾರದಲ್ಲಿ ನೇಮಕಾತಿ ಪಡೆದಿದ್ದಾರೆ ಎಂದು ವಾದಿಸಿದರು. ಆರಂಭದಲ್ಲಿಯೇ ಜಾತಿ ಪರಿಶೀಲನೆ ನಡೆಸುವಲ್ಲಿ ಅಧಿಕಾರಿಗಳಿಂದ ವಿಳಂಬವಾಗಿರುವುದನ್ನು ಒಪ್ಪಿಕೊಂಡ ಅವರು, ಮತ್ತೊಬ್ಬ ಉದ್ಯೋಗಿಯ ದೂರಿನ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಯಾಗಿ ನೌಕರರ ಪರ ವಕೀಲರು, ನೇಮಕಾತಿಯಾಗಿ ಹಲವು ವರ್ಷಗಳ ನಂತರ ಪ್ರಮಾಣಪತ್ರವನ್ನು ಪ್ರಶ್ನಿಸುವುದು ಸರಿಯಲ್ಲ ಮತ್ತು ಅಧಿಕಾರಿಗಳ ವಿಳಂಬದಿಂದ ನೌಕರನ ಉದ್ಯೋಗಕ್ಕೆ ಧಕ್ಕೆಯಾಗಬಾರದು ಎಂದು ವಾದಿಸಿದರು. ಈ ಸಂಬಂಧ ಸುಪ್ರೀಂ ಕೋರ್ಟ್ನ Dattu S/o Namdev Thakur v. State of Maharashtra ತೀರ್ಪನ್ನು ಅವಲಂಬಿಸಿದರು.
ಏಕಸದಸ್ಯ ಪೀಠದ ತೀರ್ಮಾನ
ಹಿಂದೂ ರೆಡ್ಡಿ ಸಮುದಾಯವು ಕರ್ನಾಟಕದ ರಾಜ್ಯ ಪಟ್ಟಿಯಲ್ಲಿ ಪ್ರವರ್ಗ 3(A) ಅಡಿಯಲ್ಲಿ ಸೇರಿದ್ದರೂ, ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರದ ಒಬಿಸಿ ಪಟ್ಟಿಯೇ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಗಮನಿಸಿತು.
ಆದಾಗ್ಯೂ, ನೌಕರರು ಜಾತಿ ಪ್ರಮಾಣಪತ್ರವನ್ನು ನಕಲಿಯಾಗಿ ಸೃಷ್ಟಿಸಿದ್ದಾರೆ ಅಥವಾ ವಂಚನೆಯಿಂದ ಪಡೆದಿದ್ದಾರೆ ಎಂಬ ಆರೋಪ ಇರಲಿಲ್ಲ. ಪರಿಶೀಲನಾ ಅಧಿಕಾರಿಗಳು ನೇಮಕಾತಿಯ ನಂತರ ಸುಮಾರು ಹತ್ತು ವರ್ಷಗಳ ಕಾಲ ಏಕೆ ಕ್ರಮ ಕೈಗೊಂಡಿರಲಿಲ್ಲ ಎಂಬುದಕ್ಕೂ, 2018ರ ವರದಿಯ ನಂತರ 2022ರವರೆಗೆ ಕಾಯಲು ಕಾರಣವೇನು ಎಂಬುದಕ್ಕೂ ಸಮರ್ಪಕ ವಿವರಣೆ ಇರಲಿಲ್ಲ.
ಹೀಗಾಗಿ, ನೌಕರರ ವಿರುದ್ಧ ಹೊರಡಿಸಿದ್ದ 08.08.2022ರ ಪತ್ರವನ್ನು ರದ್ದುಗೊಳಿಸಿ ಏಕಸದಸ್ಯ ಪೀಠ ಆದೇಶಿಸಿತ್ತು. ಅಲ್ಲದೆ, ಜಾತಿ ಪ್ರಮಾಣಪತ್ರಗಳ ಪರಿಶೀಲನೆಗೆ ಆನ್ಲೈನ್ ವ್ಯವಸ್ಥೆ ರೂಪಿಸುವಂತೆ ಮತ್ತು ಪರಿಶೀಲನೆಗೆ ಕಾಲಮಿತಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಹೈಕೋರ್ಟ್ ವಿಭಾಗೀಯ ಪೀಠದ ಅಭಿಪ್ರಾಯ
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಏಕಸದಸ್ಯ ಪೀಠವು ಸುಪ್ರೀಂ ಕೋರ್ಟ್ನ Dattu S/o Namdev Thakur v. State of Maharashtra (2012) ತೀರ್ಪನ್ನು ಸರಿಯಾಗಿ ಅನ್ವಯಿಸಿದೆ ಎಂದು ಅಭಿಪ್ರಾಯಪಟ್ಟಿತು.
ಅಧಿಕಾರಿಗಳಿಂದ ಆಗಿರುವ ದೀರ್ಘಕಾಲದ ವಿಳಂಬಕ್ಕೆ ಯಾವುದೇ ಸಮರ್ಥನೆ ಇಲ್ಲದಿರುವಾಗ, ಸುಮಾರು 14 ವರ್ಷಗಳ ಸೇವೆಯ ನಂತರ ನೌಕರನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನ್ಯಾಯಾಲಯ ಒಪ್ಪಲಿಲ್ಲ.
ಅಲ್ಲದೆ, ಏಕಸದಸ್ಯ ಪೀಠದ ಆದೇಶದಲ್ಲಿ ಸ್ಪಷ್ಟವಾದ ಕಾನೂನು ದೋಷ ಅಥವಾ ವಿಕೃತ ನಿರ್ಣಯ (Perversity) ಇಲ್ಲದಿದ್ದರೆ ವಿಭಾಗೀಯ ಪೀಠವು ಕೇವಲ ಮತ್ತೊಂದು ಅಭಿಪ್ರಾಯ ಸಾಧ್ಯವಿದೆ ಎಂಬ ಕಾರಣಕ್ಕೆ ಮಧ್ಯಪ್ರವೇಶಿಸಬಾರದು ಎಂದು ತಿಳಿಸಿತು.
ತೀರ್ಪಿನಲ್ಲಿನ ಪ್ರಮುಖ ನ್ಯಾಯಾಂಗ ಉಲ್ಲೇಖ
ಜಾತಿ ಪ್ರಮಾಣಪತ್ರದ ನೈಜತೆ ಮತ್ತು ಅಧಿಕಾರಿಗಳ ವಿಳಂಬಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಆದೇಶದಲ್ಲಿರುವ 12 ಮತ್ತು 14ನೇ ಪ್ಯಾರಾಗಳನ್ನು ವಿಭಾಗೀಯ ಪೀಠವು ಪರಿಗಣಿಸಿದೆ. 14ನೇ ಪ್ಯಾರಾದಲ್ಲಿನ ಪ್ರಮುಖ ಭಾಗ ಹೀಗಿದೆ:
"In Dattu’s case (supra) having held that if there is any unexplained delay, the benefit of long service cannot be taken away, I am of the considered opinion that the said decision would also apply to the present case and come to the rescue of the petitioner."
(ಕರ್ನಾಟಕ ಹೈಕೋರ್ಟ್, The Commandant, CISF v. Virupaxagouda and Others, W.A. No. 100608/2024, ಏಕಸದಸ್ಯ ಪೀಠದ ಆದೇಶದ ಪ್ಯಾರಾ 14).
ಈ ಉಲ್ಲೇಖದ ಮಹತ್ವವೆಂದರೆ, ಅಧಿಕಾರಿಗಳಿಂದ ಉಂಟಾದ ವಿವರಿಸಲಾಗದ ವಿಳಂಬದ ಕಾರಣದಿಂದ ದೀರ್ಘಕಾಲದ ಸೇವೆಯ ಪ್ರಯೋಜನವನ್ನು ಕಸಿದುಕೊಳ್ಳುವುದು ಸಮರ್ಥನೀಯವಲ್ಲ ಎಂಬ ಕಾನೂನು ತತ್ವವನ್ನು ನ್ಯಾಯಾಲಯ ಅನ್ವಯಿಸಿದೆ.
ಅಂತಿಮ ತೀರ್ಪು
ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣವಿಲ್ಲ ಎಂದು ತೀರ್ಮಾನಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು, ಸಿಐಎಸ್ಎಫ್ ಕಮಾಂಡೆಂಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು.
ಪ್ರಕರಣದ ತೀರ್ಪು: The Commandant, CISF v. Virupaxagouda and Others, Writ Appeal No. 100608 of 2024, ತೀರ್ಪಿನ ದಿನಾಂಕ: 28.10.2026, Neutral Citation: 2026:KHC-D:17609-DB.






