ಮಂಗಳೂರಿನ ಎಸ್‌.ಡಿ.ಎಂ. ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲರು, ಖ್ಯಾತ ಕಾನೂನು ಶಿಕ್ಷಣ ತಜ್ಞರೂ, ನ್ಯಾಯವಾದಿಗಳೂ ಹಾಗೂ ದಕ್ಷ ಹಾಗೂ ಶಿಸ್ತಿನ ಆಡಳಿತಗಾರರಾಗಿ ಹೆಸರಾಗಿದ್ದ ಶ್ರೀ ಎನ್.ಜೆ. ಕಡಂಬ ಅವರು ಇಹಲೋಕತ್ಯಾಗ ಮಾಡಿದ್ದಾರೆ.

ದಿನಾಂಕ 19-10-2026 ರಂದು ಅವರು ತಮ್ಮ ಸಹಸ್ರಾರು ಶಿಷ್ಯವೃಂದ ಹಾಗೂ ಅಭಿಮಾನಿಗಳನ್ನು ಅಗಲಿ ಜಿನೈಕ್ಯರಾದರು. ಅವರಿಗೆ ನಮ್ಮ ಭಾಷ್ಪಾ೦ಜಲಿ.

1974ರಲ್ಲಿ ಎಸ್‌.ಡಿ.ಎಂ. ಕಾನೂನು ಮಹಾವಿದ್ಯಾಲಯವು ಸ್ಥಾಪನೆಗೊಂಡು ಕಳೆದ ವರ್ಷವಷ್ಟೇ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಇದೀಗ ರಾಜ್ಯದ ಸ್ನಾತಕೋತರ ಅಧ್ಯಯನ ಮತ್ತು ಪ್ರಮುಖ ಕಾನೂನು ಸಂಶೋಧನಾ ಕೇಂದ್ರವಾಗಿ ಬೆಳೆದು ನಿಂತಿದೆ.

ನೂರಾರು ನ್ಯಾಯಾಧೀಶರು, ವಕೀಲರು, ಕಾನೂನು ಶಿಕ್ಷಣ ತಜ್ಞರು, ಕಾನೂನು ಅಧಿಕಾರಿಗಳು, ಸಾರ್ವಜನಿಕ ಅಭಿಯೋಜಕರು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾನೂನು ಸೇವೆ ಸಲ್ಲಿಸುತ್ತಿರುವ ಅಸಂಖ್ಯಾತ ಪ್ರತಿಭಾವಂತ ಕಾನೂನು ವೃತ್ತಿಪರರನ್ನು ಬೆಳೆಸಿದ ಎಸ್‌.ಡಿ.ಎಂ. ಲಾ ಕಾಲೇಜು ಎಂಬ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಮೂಲ ಅಡಿಪಾಯ ಹಾಕಿದವರು ಶ್ರೀ ಎನ್.ಜೆ. ಕಡಂಬರು.

ಅವರ ಪ್ರಾಂಶುಪಾಲರ ಸೇವಾ ಅವಧಿಯಲ್ಲಿ ಈ ಸಂಸ್ಥೆಯು ಗುಣಮಟ್ಟದ ಕಾನೂನು ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ವಿಶೇಷವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಅತ್ಯಂತ ಹೆಸರಾಂತ ಸಂಸ್ಥೆಯಾಗಿ ಮೂಡಿಬಂದಿತ್ತು. ಸಂಸ್ಥೆಯ ಅಭಿವೃದ್ಧಿಗಾಗಿ ಅರ್ಪಣಾ ಭಾವದಿಂದ ಶ್ರಮಿಸಿದ ಅವರ ತ್ಯಾಗಮಯ ಜೀವನವನ್ನು ನೇರವಾಗಿ ಮತ್ತು ಹತ್ತಿರದಿಂದ ಕಂಡ ವಿದ್ಯಾರ್ಥಿಗಳಿಗೆ ಅವರ ಸಾಧನೆ ಮತ್ತು ಕೊಡುಗೆಯ ಮೌಲ್ಯ ಚೆನ್ನಾಗಿ ತಿಳಿದಿದೆ.

ಸಂಸ್ಥೆಯನ್ನು ಮತ್ತು ತಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಅವರು, ತಮ್ಮ ಸರಳತೆಯಿಂದ ವಿಶೇಷವಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ. ಅವರ ಶಿಸ್ತಿಗೆ ಅಂಜುತ್ತಿದ್ದ ವಿದ್ಯಾರ್ಥಿಗಳು ಸಹ ಅವರ ಬಗ್ಗೆ ಅಪಾರವಾದ ಆದರ, ಗೌರವ ಮತ್ತು ಅಭಿಮಾನವನ್ನು ಹೊಂದಿದ್ದರು. ಅಂತಹ ಗೌರವ ಯಾವ ಕಾನೂನು ಪ್ರಾಂಶುಪಾಲರಿಗೂ ಸಿಕ್ಕಿರಲಾರದು.

ಎನ್.ಜೆ. ಕಡಂಬ ಅವರ ವ್ಯಕ್ತಿತ್ವವೇ ವಿಶಿಷ್ಟವಾದದ್ದು. ತನಗಿಂತ ಸಂಸ್ಥೆಯೇ ಶ್ರೇಷ್ಠವೆಂದು ನಂಬಿದ್ದ ಅವರು, ಎಸ್‌.ಡಿ.ಎಂ. ಕಾನೂನು ಮಹಾವಿದ್ಯಾಲಯವನ್ನು ಉತ್ತುಂಗಕ್ಕೇರಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅವರ ಮೌಲ್ಯಗಳು ಇತರ ಕಾನೂನು ಶಿಕ್ಷಣ ತಜ್ಞರಿಗೆ ಅನುಕರಣೀಯ. ಆದರ್ಶ ಗುರುಗಳಾಗಿದ್ದ ಅವರು ಸದಾ ಸ್ಮರಣೀಯರು. ಅಂತಹ ಮೇರು ವ್ಯಕ್ತಿತ್ವಕ್ಕೆ ಮತ್ತೊಮ್ಮೆ ಶಿರಬಾಗಿ ನಮಿಸುತ್ತೇವೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

– ವಿವೇಕಾನಂದ ಪನಿಯಲ | ವಕೀಲರು, ಪನಿಯಲ & ಅಸೋಸಿಯೇಟ್ಸ್ | ಮಂಗಳೂರು